2011-12-15

ಗಂಗಾವತಿಯಲ್ಲಿ ಕನ್ನಡ ಭಾವನೆಗಳ ಮಹಾಪೂರ




ಕೃಷ್ಣದೇವರಾಯನ ಆನೆಗೊಂದಿ ಅರಮನೆ, ಆಂಜನೇಯನ ಅಂಜನಾದ್ರಿ, ಭತ್ತದ ಕಣಜ ಗಂಗಾವತಿ, ಶಿಲ್ಪಕಲೆಗಳ ಬೀಡು ಹಂಪಿ ನೋಡುವುದೇ ಪುಣ್ಯ, ಕನ್ನಡ ಧೂಳಲ್ಲಿ ಮಿಂದೆದ್ದ ಕನ್ನಡಿಗರೇ ಧನ್ಯ.  ಈ ಸಾಹಿತ್ಯ ಸಮ್ಮೇಳನಕ್ಕೆ ಬಂದ ನನ್ನಲ್ಲಿ ತುಂಬಿತು ಸಂವೇದನೆಗಳಿಗೆ ಏಳು ಬಣ್ಣ, ಅಯಾಚಿತವಾಗಿ ಹೊರ ಬಂತು ಸುದೀರ್ಘ ಚಂಪೂ ಕವನ. ಓದುವ ಕನ್ನಡ ಪ್ರೇಮಿಗಳೇ ನಿಮಗಿದೋ ನನ್ನ ನಮನ.  

ಗಂಗಾವತಿ ಸಮ್ಮೇಳನ ಸಭಾಂಗಣವೇ ಅಮರಾವತಿ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣ ಸಾಹಿತ್ಯ ಕೃಷಿ
ಹೊರಾಂಗಣದ ಜಾತ್ರೆಯಲ್ಲಿ ಜನರಿಗೆ ಖರೀದಿ ಖುಷಿ
ಬಟ್ಟೆ, ಕಳ್ಳೆಪುರಿ ವ್ಯಾಪಾರಿಗಳಿಗೆ ವಹಿವಾಟಿನ ಸುಗ್ಗಿ
ಸುಗ್ಗಿ ಕೃಷಿ ಬಿಟ್ಟು ಮೇಳಕ್ಕೆ ಬಂದ ಕೃಷಿಕರಿಗೆ ಎಗ್ಗಿಲ್ಲದ ಖುಷಿ
ಪುಸ್ತಕ ಮಾರಾಟಗಾರರಿಗೆ ಮಾತ್ರ ಕಸಿವಿಸಿ, ತಲೆಬಿಸಿ || 1 |

ಪ್ರಾಣೇಶ್ ಹಾಸ್ಯಕ್ಕೆ ಚಪ್ಪಾಳೆ ಹೊಡೆಯುವ ಅದೇ ರೀತಿ ಹೋರಾಟಕ್ಕೆ ಕೈ ಎತ್ತಿ ಪ್ರಾಣ ಕೊಡುವೆ ಎನ್ನುವ ಈ ಹೈ.ಕ. ನಾಡಿನವರ ಸಮ್ಮೇಳನವೂ ಹೈ ಕ್ಲಾಸ್ ! ಆದರೆ ಬಟ್ಟ ಬಯಲಲ್ಲಿ ತಂಬಿಗೆ ಹಿಡಿದು ಕುಕ್ಕರಗಾಲಲ್ಲಿ ಕುಂತು ಬಹಿರ್ದೆಶೆ ಜತೆ ಉಭಯಕುಶಲೋಪರಿ ಇನ್ನೊಂದು ಕ್ಲಾಸ್ !

ಪ್ರಾಂಗಣದ ಹೊರಗೂ ತುಂಬಿದ ಜನ
ಇಲ್ಲಿನ ಕನ್ನಡಿಗರಿಗೆ ಕನ್ನಡವೇ ಪ್ರಾಣ
ಎಲ್ಲೆಲ್ಲೂ ಕಾವ್ಯ, ಕವನ ಗಾಯನದ ಅನುರಣ
ಹೊರಾಂಗಣದಲ್ಲಿ ದೂಳು, ಆಶೌಚದ ಅನಾವರಣ!
ಅತಿಥಿಗಳಿಗೆ ಮನೆ ಮನೆಯಲ್ಲಿ ಭೂರಿ ಭೋಜನ
ಸಮ್ಮೇಳನದಲ್ಲಿ ಮಾತ್ರ ಬರೀ ಜನವೋ ಜನ

ಬರ್ರಿ, ಕುಂದುರ್ರಿ ರೊಟ್ಟಿ ತಗೋರಿ ಎಂದು ಆತಿಥ್ಯ ನೀಡುವ ಸಹೃದಯರ ಭಾಷೆ ಒಂದೆಡೆ,  ನಾ ಒಳ್ಳೆ ಸೂಳ ಮಗ, “ಅವ ಕೆಟ್ಟ ಉಡಾಳ್ ಸೂಳಮಗ ಅದಾನ’” ಎನ್ನುವ  ಅಶ್ಲೀಲ ಸಾಹಿತ್ಯ ಇಲ್ಲಿ ಜನಜನಿತ, ಎಂದಿಗೂ ಆಗದು ಅಹಿತ !

ಏಳು ಗುಡ್ಡಗಳ ಗಂಗಾವತಿಯಲ್ಲಿ ಸಾಹಿತ್ಯ ಗಂಗೆ ಹರಿಯುತ್ತಿರೆ
ಸಮೀಪದ ಪಂಪಾನದಿ ತೀರದಿ ಹರಿಯುತ್ತಿದೆ ಮದಿರೆ ಹೊಳೆ
ಪಕ್ಕದಲ್ಲಿ ಸುಂದರ ಶಿಲ್ಪಗಳ ವಿಶ್ವ ವಿಖ್ಯಾತ ಹಂಪಿ,
ವಿರೂಪಾಪುರ ಗಡ್ಡಿ ಹಾಳು ಮೂಳುಗಳ ಕೊಂಪಿ
ನಿಶೆ ಏರುತ್ತಿರೆ ಸಣಾಪುರ ಕೆರೆಯಲ್ಲಿ ಬೆಳದಿಂಗಳ ಬೆಳ್ಳಿ ನೊರೆ
ನದಿ ದಡದಲ್ಲಿ ಪವಡಿಸಿದ ವಿದೇಶಿಯರ ಬಾಯಲ್ಲಿ ಮದಿರೆಯ ನೊರೆ
ಅಲ್ಲೊಂದು ಸಾರಸ್ವತ ಲೋಕ, ಇಲ್ಲಿ ಬರಿದೇ ಮಾದಕ ಲೋಕ

ಸಮ್ಮೇಳನದ ವಿಶಾಲ ಮಾಧ್ಯಮ ಕೇಂದ್ರ ಈ ಬಾರಿ ಜನರ ಕುತೂಹಲ ಕೇಂದ್ರ, ಕಂಪ್ಯೂಟರ್, ಲ್ಯಾಪ್ ಟಾಪ್ ಮುಂದೆ ಕುಂತು ಕೀಲಿ ಮಣೆಗಳಲ್ಲಿ ಕೈ ಒತ್ತುವವರ ಕಾಣಲು ಕುತೂಹಲಿಗಳ ದಂಡು. ವಸ್ತು ಪ್ರದರ್ಶನವೋ ಎನ್ನುವಂತೆ ಅನುಕ್ಷಣವೂ ರಶ್ಶೋ ರಶ್.

ಮಾಧ್ಯಮ ಲೋಕದಲ್ಲಿ ಸುದ್ದಿ ಸಮೃದ್ಧಿ
ಆಗಬಹುದೇ ಕನ್ನಡ ಸಾಹಿತ್ಯದ ವೃದ್ಧಿ
ಇದೆಲ್ಲವೂ ನೋಡುಗರ ದೃಷ್ಟಿ
ಬಂದು ಹೋಯಿತು ಮತ್ತೊಂದು ಖಗ್ರಾಸ ಚಂದ್ರಗ್ರಹಣ
ಸರಿಯಲಿ ಕನ್ನಡಕ್ಕೆ, ಕನ್ನಡ ಶಾಲೆಗಳಿಗೆ  ಬಡಿದ ಗ್ರಹಣ
|


1 ಕಾಮೆಂಟ್‌:

VENU VINOD ಹೇಳಿದರು...

ವಾವಾವಾ...ಒಳ್ಳೆಯ ಕವಿತೆ..ಚಂಪೂ ಕಾವ್ಯಂ ಗೆಲ್ಗೆ..